ಬೆಂಗಳೂರಿನಲ್ಲಿ ಏಸರ್ನ ನೇತ್ರದೀಪ ಕಣ್ಣಿನ ಆರೈಕೆ ಕೇಂದ್ರ ಆರಂಭ
BPL ಕುಟುಂಬಗಳಿಗೆ ಉಚಿತ ಚಿಕಿತ್ಸೆ; ಇತರರಿಗೆ ರಿಯಾಯಿತಿ ದರದಲ್ಲಿ ಕಣ್ಣಿನ ಆರೈಕೆ
ಬೆಂಗಳೂರು, ಸೆಪ್ಟೆಂಬರ್ 9, 2026: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಏಸರ್ ಇಂಡಿಯಾ ತನ್ನ ಪ್ರಮುಖ CSR ಉಪಕ್ರಮವಾದ ‘ಪ್ರಾಜೆಕ್ಟ್ ಹ್ಯೂಮ್ಯಾನಿಟಿ’ ಅಡಿಯಲ್ಲಿ ಬೆಂಗಳೂರಿನ ದೊಮ್ಮಲೂರಿನಲ್ಲಿ ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರವನ್ನು ಆರಂಭಿಸಿದೆ.
ರೋಟರಿ ಬೆಂಗಳೂರು ಇಂದಿರಾನಗರ ಸಹಯೋಗದಲ್ಲಿ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಬೆಂಬಲದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. BPL ಕಾರ್ಡ್ ಹೊಂದಿರುವವರಿಗೆ ಇಲ್ಲಿ ಉಚಿತ ಕಣ್ಣಿನ ಆರೈಕೆ ಸೇವೆ ದೊರೆಯಲಿದ್ದು, ಇತರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಎದುರಾಗುವ ಆರ್ಥಿಕ ಅಡಚಣೆ ಹಾಗೂ ಆರೋಗ್ಯ ಸೇವೆಗಳ ಸೀಮಿತ ಲಭ್ಯತೆಯನ್ನು ಕಡಿಮೆ ಮಾಡುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ನೇತ್ರದೀಪ್ ಕೇಂದ್ರದಲ್ಲಿ ವೈದ್ಯಕೀಯ ಸಮಾಲೋಚನೆ, ರೋಗನಿರ್ಣಯ ಪರೀಕ್ಷೆಗಳು, ಕಣ್ಣಿನ ಚಿಕಿತ್ಸೆಯ ಜೊತೆಗೆ ಕಾರ್ನಿಯಾ, ರೆಟಿನಾ ಮತ್ತು ಗ್ಲಾಕೋಮಾ ಸಂಬಂಧಿತ ವಿಶೇಷ ಸೇವೆಗಳು ಲಭ್ಯವಿರಲಿವೆ. ವಕ್ರೀಭವನದ ದೋಷಗಳಿಗೆ ಚಿಕಿತ್ಸೆ ಹಾಗೂ ಲೇಸರ್ ಆಧಾರಿತ ಚಿಕಿತ್ಸಾ ವಿಧಾನಗಳನ್ನೂ ಇಲ್ಲಿ ಒದಗಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಸೂಕ್ತ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು. ಇದರಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯೂ ಸೇರಿದೆ.
ವಯೋಸಹಜ ಬದಲಾವಣೆಗಳು, ಮಧುಮೇಹ, ಬದಲಾಗುತ್ತಿರುವ ಜೀವನಶೈಲಿ ಹಾಗೂ ಡಿಜಿಟಲ್ ಪರದೆಗಳ ಹೆಚ್ಚುತ್ತಿರುವ ಬಳಕೆಯಿಂದ ಕಣ್ಣಿನ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಡಯಾಬಿಟಿಕ್ ರೆಟಿನೋಪತಿ ಮತ್ತು ಗ್ಲಾಕೋಮಾದಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಗಂಭೀರ ದೃಷ್ಟಿಹೀನತೆಯನ್ನು ತಡೆಗಟ್ಟಲು ಸಾಧ್ಯವಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಏಸರ್ ಇಂಡಿಯಾ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕೊಹ್ಲಿ, ಕಂಪನಿಯ ಸಾಮಾಜಿಕ ಜವಾಬ್ದಾರಿ ತಂತ್ರಜ್ಞಾನ ಮತ್ತು ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದರು.
“ನಮ್ಮ ಸುತ್ತಮುತ್ತಲಿನ ಸಮುದಾಯಗಳ ಮೇಲೆ ಸಕಾರಾತ್ಮಕ ಮತ್ತು ಶಾಶ್ವತ ಪರಿಣಾಮ ಬೀರುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ‘ಪ್ರಾಜೆಕ್ಟ್ ಹ್ಯೂಮ್ಯಾನಿಟಿ’ ಈ ಬದ್ಧತೆಯ ಪ್ರತೀಕವಾಗಿದ್ದು, ನೇತ್ರದೀಪ್ ಈ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ,” ಎಂದರು.
ಉತ್ತಮ ದೃಷ್ಟಿ ವ್ಯಕ್ತಿಯ ಶಿಕ್ಷಣ, ಉದ್ಯೋಗ, ಜೀವನೋಪಾಯ ಮತ್ತು ಸ್ವಾವಲಂಬನೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆರ್ಥಿಕ ಅಡಚಣೆಗಳು ಗುಣಮಟ್ಟದ ಕಣ್ಣಿನ ಆರೈಕೆ ಪಡೆಯಲು ತಡೆಯಾಗಬಾರದು ಎಂಬುದು ನೇತ್ರದೀಪ್ನ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಮಾತನಾಡಿ, ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆಗಳು ಸಮುದಾಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ ಎಂದರು.
“ದೃಷ್ಟಿ ಶಿಕ್ಷಣ, ಜೀವನೋಪಾಯ, ಸ್ವಾವಲಂಬನೆ ಮತ್ತು ಜೀವನದ ಗುಣಮಟ್ಟದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಆದರೆ ಕಣ್ಣಿನ ಸಮಸ್ಯೆ ಗಂಭೀರವಾಗುವವರೆಗೆ ಹಲವರು ಅದನ್ನು ನಿರ್ಲಕ್ಷಿಸುತ್ತಾರೆ,” ಎಂದು ಹೇಳಿದರು.
ನೇತ್ರದೀಪ್ ಕೇಂದ್ರ ಸ್ಥಾಪನೆಗೆ ಅನುಕೂಲವಾಗುವಂತೆ ಕಟ್ಟಡದಲ್ಲಿದ್ದ ತಮ್ಮ ಕಚೇರಿ ಸ್ಥಳವನ್ನು ಒದಗಿಸಿರುವುದಾಗಿ ಹ್ಯಾರಿಸ್ ತಿಳಿಸಿದರು.
ರೋಟರಿ ಬೆಂಗಳೂರು ಇಂದಿರಾನಗರದ ಅಧ್ಯಕ್ಷ ಹಾಗೂ ಬೆಂಗಳೂರು ಇಂದಿರಾನಗರ ರೋಟರಿ ಟ್ರಸ್ಟ್ (BIRT) ಅಧ್ಯಕ್ಷ ಗೋಪಿನಾಥ್ ನಾರಾಯಣನ್ ಮಾತನಾಡಿ, ನೇತ್ರದೀಪ್ ಕೇವಲ ಕಣ್ಣಿನ ತಪಾಸಣಾ ಕೇಂದ್ರವಲ್ಲ, ಚಿಕಿತ್ಸಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ ಎಂದರು.
ಆರ್ಥಿಕವಾಗಿ ಹಿಂದುಳಿದವರಿಗೆ ಹಲವು ಕಣ್ಣಿನ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇತರರಿಗೆ ನಾಮಮಾತ್ರದ ಶುಲ್ಕದಲ್ಲಿ ಸೇವೆ ಒದಗಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಹೋಸಕೋಟೆಯ ಗ್ಲೋಬ್ ಐ ಫೌಂಡೇಶನ್ಗೆ ಕರೆದೊಯ್ದು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇರಲಿದೆ.
ರೋಟರಿ ಬೆಂಗಳೂರು ಇಂದಿರಾನಗರ ಈಗಾಗಲೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರಿನಲ್ಲಿ ನಿಯಮಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ನಡೆಸುತ್ತಿದೆ.
ಕೈಗೆಟುಕುವ ಚಿಕಿತ್ಸೆ, ಆರಂಭಿಕ ರೋಗನಿರ್ಣಯ ಮತ್ತು ಸಮುದಾಯ ಆಧಾರಿತ ಜಾಗೃತಿ ಕಾರ್ಯಕ್ರಮಗಳ ಮೂಲಕ ತಡೆಗಟ್ಟಬಹುದಾದ ಅಂಧತ್ವವನ್ನು ಕಡಿಮೆ ಮಾಡುವುದು ಹಾಗೂ ಅಗತ್ಯವಿರುವ ಜನರಿಗೆ ಗುಣಮಟ್ಟದ ಕಣ್ಣಿನ ಆರೈಕೆ ತಲುಪಿಸುವುದು ನೇತ್ರದೀಪ್ನ ಪ್ರಮುಖ ಗುರಿಯಾಗಿದೆ.
ಏಸರ್ ಇಂಡಿಯಾದ ‘ಪ್ರಾಜೆಕ್ಟ್ ಹ್ಯೂಮ್ಯಾನಿಟಿ’ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನೇತ್ರದೀಪ್ ಈ CSR ಪ್ರಯತ್ನಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ.
-Active Info Hub




Comments
Post a Comment